ಪಾಠದ ಯೋಜನೆ -
ಒಂದು ಪಾಠ ವಿಷಯಕ್ಕೆ ಸಂಬಂದಿಸಿದಂತೆ ಲಭ್ಯವಿರುವ ಶೈಕ್ಷಣಿಕ ಚಟುವಟಿಕೆಗಳು ಮತ್ತು ಬೋಧನ ಸಾಮಗ್ರಿಗಳನ್ನು ಅರ್ಥಪೂರ್ಣವಾಗಿ ಹೊಂದಿಸಿಕೊಳ್ಳುವ ಕ್ರಿಯೆ. ಇದು ಆ ವಿಷಯದ ಹಲವಾರು ಪಾಠ ವಿಭಾಗಗಳನ್ನು ಒಳಗೊಂಡಿರುತ್ತದೆ. ಪಾಠ ಯೋಜನೆಯನ್ನು ಸಿದ್ದಪಡಿಸುವುದು ಒಂದು ಸೃಜನಾತ್ಮಕ ಕಲೆ. ಉಪಾಧ್ಯಾಯನ ಬೋಧನಾನುಭವ, ಪಠ್ಯವಸ್ತು, ಸಂಪನ್ಮೂಲ ಸಾಮಗ್ರಿಗಳು, ಪ್ರಕೃತ ವಿಷಯಕ್ಕೆ ಸಂಬಂದಿಸಿದ ಸಂಶೋಧನೆಯ ವಿವರಗಳು, ಈ ಪಾಠಕ್ಕೆ ಸಂಬಂಧಪಟ್ಟಂತೆ ಸಾಮಾನ್ಯ ಹಾಗೂ ನಿರ್ದಿಷ್ಟ ಗುರಿ ಮುಂತಾದ ಅಂಶಗಳು ಯೋಜನೆಯ ಮೇಲೆ ಪ್ರಭಾವ ಬೀರುತ್ತದೆ.

ಪಾಠ ಯೋಜನೆಯನ್ನು ತಯಾರು ಮಾಡುವ ಮೊದಲು ಗುರಿ ಮತ್ತು ಉದ್ದೇಶಗಳ ಬಗ್ಗೆ ಯೋಚಿಸುವುದು, ಅವಧಿಗೆ ಬೇಕಾದಷ್ಟೆ ಪಾಠಭಾಗವನ್ನು ಅರ್ಥಪೂರ್ಣವಾಗಿ ಆಯ್ಕೆ ಮಾಡುವುದು, ವಿದ್ಯಾರ್ಥಿಗಳ ದೃಷ್ಟಿಯಿಂದ ಅತ್ಯುತ್ತಮವಾದ ಬೋಧನ ವಿಧಾನವನ್ನು ಕುರಿತು ಚಿಂತಿಸುವುದು, ಗುರಿ ಆಧಾರಿತ ಮೌಲ್ಯಮಾಪನದ ಬಗ್ಗೆ ಯೋಚಿಸುವುದು, ಮಕ್ಕಳ ಹಿತದೃಷ್ಟಿಯಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಿಯೋಜಿಸುವುದು- ಮುಂತಾದುವುಗಳ ಬಗ್ಗೆ ಯೋಚಿಸಬೇಕು. ಇದರಿಂದ ಕಾಲ ಮತ್ತು ಶ್ರಮದ ಸದುಪಯೋಗವೂ ಆಗುತ್ತದೆ. ಬೋಧನ ಕಾರ್ಯದಲ್ಲಿ ನಿಷ್ಕøಷ್ಟತೆ ಗೋಚರಿಸುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿತನ ಹೆಚ್ಚಿ ತರಗತಿಯ ಶಿಸ್ತು ಪಾಲನೆಗೆ ನೆರವಾಗುತ್ತದೆ. ಆಗತಾನೆ ಶಿಕ್ಷಕರಾದವರಲ್ಲಂತೂ ಇಂಥ ಪಾಠದ ಯೋಜನೆ ವಿಶ್ವಾಸವನ್ನು ಮೂಡಿಸುತ್ತದೆ. ಬೋಧನೆ ಕ್ರಮಬದ್ಧವಾಗುತ್ತದಾಗಿ ವೃತಾಕಾಲಹರಣ ಅನವಶ್ಯಕವಾಗಿ, ಗೊತ್ತುಗುರಿಯಿಲ್ಲದೆ ಪಾಠ ಹೇಳುವುದು ಇಂಥ ತಪ್ಪುಗಳಿಗೆ ಅವಕಾಶವಿರುವುದಿಲ್ಲ. ಅಲ್ಲದೆ ಪ್ರತಿ ಹಂತದಲ್ಲೂ ತಾನು ಸಿದ್ಧಪಡಿಸಿರುವ ಬೋಧನ ಸಾಮಗ್ರಿ ಸಾಕೆ, ವೈವಿಧ್ಯವಿದೆಯೆ-ಎಂದು ಪರೀಕ್ಷಿಸಲು ಅವಕಾಶವಿರುತ್ತದೆ.

ಪಾಠದ ಟಿಪ್ಪಣಿ ಕೇವಲ ಒಂದು ಪಾಠ ಬೋಧನೆಗೆ ಮಾತ್ರ ಮೀಸಲಾದ್ದು. ಪಾಠ ಯೋಜನೆಯಾದರೋ ಒಂದು ಪಠ್ಯವಿಷಯದ ಹಲವಾರು ಪಾಠಗಳಿಗೆ ಸಂಬಂಧಿಸಿದ ಸ್ಥೂಲವಿವರಗಳನ್ನು ಒಳಗೊಂಡಿರುತ್ತದೆ.
(ನೋಡಿ- ಪಾಠದ-ಟಿಪ್ಪಣಿ)
(ಬಿ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ